- ನಿರ್ಬಂಧದ ಒಳ್ಳೆಯತನದ ಅಭ್ಯಾಸ ನಮಗೆ ಹೆಚ್ಚಿದಷ್ಟೂ ನೈಜದ ಒಳ್ಳೆಯತನದ ಅಭ್ಯಾಸ ಮರೆತುಹೋಗುತ್ತದೆ. (ರಾಜ್ಯಶಾಸ್ತ್ರ)
- ಕಾವ್ಯದ ನೀತಿಪ್ರಭಾವವು ಪ್ರತ್ಯಕ್ಷಬೋಧನೆಯಿಂದಲ್ಲ, ಅಪ್ರತ್ಯಕ್ಷಹೃದಯಪರಿವರ್ತನೆಯಿಂದ.ಕಾವ್ಯಕ್ಕೆ ಬೇಕಾದದ್ದು ಬಹಿರಂಗಪ್ರಮಾಣವಲ್ಲ, ಅಂತರಂಗಪ್ರಮಾಣ.ಅಂತಃಕರಣದ ಸ್ವತಃಪ್ರವರ್ತಿತಸದ್ಭಾವಪ್ರವಾಹವೇ ಮಹಾಕಾವ್ಯದ ಪರಮೋಪಕಾರ.ಮಹಾಕಾವ್ಯದ ಬಳಿ ಹೋಗುವವರು ತಾಯ ಬಳಿ ಹೋಗುವ ಎಳೆಮಕ್ಕಳಂತೆ ಮನಸ್ಸು ಮಾಡಿಕೊಂಡು ಹೋಗಬೇಕು. ಅಂಥ ಅಕೃತ್ರಿಮ, ಅಂಥ ಸರಳತೆ, ಅಂಥ ಅವಿಶಂಕೆ, ಅಂಥ ಅವಿತರ್ಕ, ಅಂಥ ಸಿದ್ಧವಿಶ್ವಾಸ—ಇವು ಇಲ್ಲದವರಿಗೆ ಕಾವ್ಯಮಾತೆ ಒಲಿಯಳು. ಕಾವ್ಯಲಕ್ಷಣಗಳು ವೇದದಲ್ಲಿ ಯಥೇಷ್ಟವಾಗಿವೆ ... ಆದರೂ ವೇದವು ಕಾವ್ಯವಾಗದು. ಏಕೆಂದರೆ ಕಾವ್ಯದಲ್ಲಿ ಕೇಂದ್ರಸ್ಥಾನ ಮನುಷ್ಯನದು, ವೇದದಲ್ಲಿ ಕೇಂದ್ರಸ್ಥಾನ ದೇವತೆಯದು. (ಶ್ರೀಮದ್ವಾಲ್ಮೀಕಿರಾಮಾಯಣಂ, ಬಾಲಕಾಂಡ: ಮುನ್ನುಡಿ)
- ರಸಿಕತೆ ಎಂದರೆ ಜೀವನದ ಎಲ್ಲ ರಂಗಗಳಲ್ಲಿಯೂ ಸೊಗಸನ್ನು ಹುಡುಕುವ ಪ್ರವೃತ್ತಿ, ಮತ್ತು ಇರುವ ಸೊಗಸನ್ನು ಕಂಡು ಸವಿಯುವ ಶಕ್ತಿ. (ಜ್ಞಾಪಕಚಿತ್ರಶಾಲೆ, ಸಾಹಿತಿ-ಸಜ್ಜನ-ಸಾರ್ವಜನಿಕರು)
- ಜೀವನಸಮೃದ್ಧಿ, ಜೀವನಸಂಸ್ಕಾರ, ಜೀವನಸೌಂದರ್ಯ—ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗನಿಷ್ಠೆಯಲ್ಲ; ಅದು ವೇದ-ವೇದಾಂತಗಳ ಸಾರಾಂಶ.(ಬಾಳಿಗೊಂದು ನಂಬಿಕೆ)
- ಅಂತಸ್ಸಮತೆ-ಬಹಿಸ್ತಾರತಮ್ಯ—ಇವು ಲೋಕಹಿತಸೂತ್ರದ ಎರಡು ಭಾಗಗಳು.(ಜೀವನಧರ್ಮಯೋಗ)
- ಲೋಕಸ್ನೇಹಪ್ರಧಾನವಾದ ಸ್ವಧರ್ಮಪ್ರಕಾಶವೇ ಸಂಸ್ಕೃತಿ. (ಸಂಸ್ಕೃತಿ)
- ಮನಸ್ಸಿನೊಳಗಡೆ ದ್ವೇಷ-ಉದ್ವೇಗಗಳಿಲ್ಲದಿರುವುದೇ ಸಹನೆ; ಬುದ್ಧಿಯ ಒಳಗಡೆ ಉದಾಸೀನತೆ-ಜಡತೆಗಳು ಸೇರದೆ ವಿವೇಚನೆ-ಪ್ರೇರಣೆಗಳು ನಡೆಯುತ್ತ, ಹೊರಗಡೆ ಕಾರ್ಯಪರಂಪರೆಯಾಗುವುದೇ ಪ್ರಯತ್ನ. (ಬಾಳಿಗೊಂದು ನಂಬಿಕೆ)
- ನಿಜವಾದ ವಿರಕ್ತಿಯಲ್ಲಿ ಬೇಡವೆಂಬುದಕ್ಕೆ ಒಂದು ಸ್ಥಾನವಿರುವಂತೆ ಬೇಕೆಂಬುದಕ್ಕೂ ಇರುತ್ತದೆ; ಅಥವಾ ಬೇಕೆಂಬುದು ತಪ್ಪಾದರೆ ಬೇಡವೆಂಬುದೂ ತಪ್ಪಾದೀತು. ರಾಗವು ಅದಕ್ಕೆ ಹೇಗೆ ವರ್ಜ್ಯವೋ ದ್ವೇಷವೂ ಹಾಗೆ ವರ್ಜ್ಯವೇ. (ಉಮರನ ಒಸಗೆ)
- ಸುಖವೂ ದುಃಖದಂತೆಯೇ ಮನುಷ್ಯಜೀವನಕ್ಕೆ ಅವಶ್ಯವಾದ ಒಂದು ಸಂಸ್ಕಾರ.(ಶ್ರೀಕೃಷ್ಣಪರೀಕ್ಷಣಂ)
- ಅಂಗೀಕಾರವೂ ವರ್ಜನೆಯಂತೆ ಒಂದು ಮನಃಪರಿಪಾಕಕ್ರಮ. ಎಷ್ಟೋ ಸಂದರ್ಭಗಳಲ್ಲಿ ತ್ಯಾಗಕ್ಕೆ ದಾರಿ ಭೋಗದ ಬಾಗಿಲಿನಿಂದಲೇ ಇದ್ದೀತು. ಭೋಗವೂ ಅದರಿಂದ ಬರುವ ಮನೋವಿಕಾಸವೂ ಜೀವಕ್ಕೆ ಒಂದು ತೆರದ ವಿದ್ಯಾಭ್ಯಾಸ. (ಉಮರನ ಒಸಗೆ)
- ಪುರಾತನದಲ್ಲಿ ಸತ್ತ್ವವಿದ್ದರೆ ಅದು ನಮಗೆ ಕಾಲಾನುಕಾಲಕ್ಕೆ ಹಿಂತಿರುಗಿಬರುತ್ತದೆ. ಅದರಲ್ಲಿ ಸತ್ತ್ವವಿಲ್ಲದಿದ್ದಲ್ಲಿ ಅದರ ಅಳಿವಿಗಾಗಿ ಯಾರೂ ಅಳಬೇಕಾದದ್ದಿಲ್ಲ. (ಬಾಳಿಗೊಂದು ನಂಬಿಕೆ)
- ವೇದವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿವಚನಪರಂಪರೆಯಾದರೆ ಸಂಪ್ರದಾಯವೆಂಬುದು ಅವಿಚ್ಛಿನ್ನವಾಗಿ ಬಂದಿರುವ ಋಷಿಕರ್ಮಪರಂಪರೆ. (ವಿದ್ಯಾರಣ್ಯರ ಸಮಕಾಲೀನರು, ಸಾಯಣಾಚಾರ್ಯರು)
- ಚಿದಂಶದ ಸ್ವತಃಸ್ಫುರಣೆಯೇ ಋತ ... ಋತದ ವಾಗ್ರೂಪ ಸತ್ಯ; ಸತ್ಯದ ಕ್ರಿಯಾರೂಪವೇ ಧರ್ಮ. ಋತ ಅಂತರನುಭೂತಯಥಾರ್ಥ, ಸತ್ಯ ಬಹಿಃಸಾಧಿತಯಥಾರ್ಥ. ಅದದು ಅದರದರ ಲೋಕೋಪಯೋಗಯೋಗ್ಯತೆಯಲ್ಲಿ ಸಮೃದ್ಧವಾಗಿರಬೇಕು. ಈ ಬಗೆಯ ತತ್ತದಾತ್ಮಗುಣಪ್ರಾಚುರ್ಯವೇ ಧರ್ಮ. (ಋತ, ಸತ್ಯ, ಧರ್ಮ)
- ಜೀವಕ್ಕೂ ಜಗತ್ತಿಗೂ ನಡುವೆ ಇರಬೇಕಾದ ಅನ್ಯೋನ್ಯಹಿತಸಂಬಂಧವೇ ಧರ್ಮ.(ಜೀವನಧರ್ಮಯೋಗ)
- ಧರ್ಮಸಾಧನೆಯಲ್ಲಿ ದಯೆಗೊಂದು ಸ್ಥಾನವಿದ್ದರೆ ದಂಡಕ್ಕೂ ಒಂದು ಸ್ಥಾನವಿರುತ್ತದೆ. ಧರ್ಮವನ್ನು ಉಳಿಸಹೊರಟವನಿಗೆ ಮೊದಲು ಬೇಕಾದ ಗುಣ ಎದೆಗಾರಿಕೆ. ಅನ್ಯಾಯವನ್ನೂ ಅಧರ್ಮವನ್ನೂ ಕಂಡಾಗ ಎದುರಿಸಿ ಹೋರದೆ ಓಡಿಹೋಗುವೆನೆಂಬುವನು ತೋರುವುದು ದಯೆಯನ್ನಲ್ಲ, ಅಧರ್ಮಪ್ರೋತ್ಸಾಹವನ್ನು. (ಜೀವನಧರ್ಮಯೋಗ)
- ಸಮನ್ವಯಕ್ಕೆ ಪೀಠಿಕೆಯಾದದ್ದು ವಿಷಯಾಂಶತಾರತಮ್ಯನಿರ್ಣಯ ... ಅದರಲ್ಲಿ ಯಾವುದಕ್ಕೂ ಅನ್ಯಾಯವಿಲ್ಲ; ಯಾವುದಕ್ಕೂ ಅದರ ಯೋಗ್ಯತೆಯನ್ನು ಮೀರಿದ ಪ್ರಾಶಸ್ತ್ಯವಿಲ್ಲ. (ಸಂಸ್ಕೃತಿ)
- ವಿಶ್ವಸೃಷ್ಟಿಗೆ ಆದಿಕಾಲವೆಂಬುದೊಂದು ಇತ್ತೆಂದು ಇಟ್ಟುಕೊಳ್ಳುವುದಾದರೆ—ಆ ಆದಿದಿವಸದಿಂದಲೇ, ಆ ಪ್ರಾರಂಭದ ಘಳಿಗೆಯಿಂದಲೇ ಪ್ರಕೃತಿಯು ಮನುಷ್ಯಹೃದಯದಲ್ಲಿ ಹಕಾರಬೀಜವನ್ನು ಹುದುಗಿಸಿ ಬೆಳಸಿಕೊಂಡು ಬಂದಿರುವಂತೆ ತೋರುತ್ತದೆ. ಆಶ್ಚರ್ಯವಾದರೆ ಅವನು “ಆಹಾ!” “ಓಹೋ!” ಎಂದು ಅರಚುತ್ತಾನೆ; ಭಯವಾದರೆ “ಹಾಹಾ”ಕಾರ ಮಾಡುತ್ತಾನೆ; ಕೋಪ ಬಂದರೆ “ಹುಂ”ಕರಿಸುತ್ತಾನೆ; ಆಶೆಯಾದರೆ “ಹಾ!” ಎಂದು ಬಾಯಿ ಬಿಡುತ್ತಾನೆ; ನೋವಾದರೆ “ಹೋ!” ಎಂದು ಅಳುತ್ತಾನೆ. ಪ್ರೀತಿಯಾದರೆ “ಹಹ್ಹಹಾ!” ಎಂದು ಲಲ್ಲೆ ಹಾಕುತ್ತಾನೆ; ಸಂತೋಷವಾದರೆ “ಹೀ! ಹೀ!” ಎಂದು ನಗುತ್ತಾನೆ; ಹೀನಾಯ ಮಾಡಬೇಕೆಂದರೆ “ಹೇ ಹೇ!” ಎನ್ನುತ್ತಾನೆ. ಹೀಗೆ ಅವನ ಮನಸ್ಸಿನಲ್ಲಿ ಯಾವ ಹೆಚ್ಚುಕಡಮೆಗಳು ನಡೆದರೂ ಅವನ ಬಾಯಿಂದ ಹೊರಡುತ್ತವೆ ಹಕಾರವಿಕಾರಗಳು. ಇದು ಕನ್ನಡದಲ್ಲಿ ಮಾತ್ರವೇ ಅಲ್ಲ; ಸಂಸ್ಕೃತದಲ್ಲಿಯೂ ಹಾಗೆಯೇ; ಇಂಗ್ಲಿಷಿನಲ್ಲಿ ಕೂಡ ಹಾಗೆಯೇ. ಈ “ಹ”ಆವಳಿಗಳೇ (ಹಾವಳಿ) ನಮ್ಮ ಶೃಂಗಾರ-ವೀರಾದಿ ಅಷ್ಟರಸಗಳು, ಆದಿರಸವಾದ ಶಾಂತ ಕೂಡ ಅದೇಯಂತೆ: “ಏತತ್ಸಾಮಗಾಯನ್ನಾಸ್ತೇ— “ಹಾ (೩) ವು ಹಾ (೩) ವು ಹಾ (೩) ವು” (ಉಮರನ ಒಸಗೆ)
- ಮಡದಿಮಕ್ಕಳ ಪೇಚಾಟ, ಬಂಧುಬಳಗಗಳ ಕಚ್ಚಾಟ, ಅಂಗಡಿಯವನ ಕೂಡ ಗುದ್ದಾಟ, ಬ್ಯಾಂಕುಗಳಲ್ಲಿ ಬಂಡಾಟ, ಆಫೀಸುಗಳಲ್ಲಿ ಒದ್ದಾಟ - ಈ ಎಲ್ಲ ಆಟಗಳೂ ಜೀವದ ಗಟ್ಟಿ ಗಂಟುಗಳನ್ನು ಹಿಸುಕಿ, ಬೇಯಿಸಿ ಮೆತುಮಾಡುತ್ತವೆ. ಜೀವದ ಸೊಟ್ಟುಗಳನ್ನು ನೇರ ಮಾಡಿ, ಅಳ್ಳಕಗಳನ್ನು ದಟ್ಟವಾಗಿಸುತ್ತವೆ. ಅಹಮೇಕಭಾವವನ್ನು ತೆಳುವು ಮಾಡುತ್ತವೆ; ಮಮತಾಕ್ಷೇತ್ರವನ್ನು ವಿಸ್ತಾರಪಡಿಸುತ್ತವೆ. ಹೀಗೆ ಕರ್ಮದಿಂದ ಆಗುವ ಸ್ವಾರ್ಥಶೋಷಣೆ.
- ಲೋಕದ ದೃಷ್ಟಿಯಿಂದ ಭಗವದನುಭವದ ಹೊರ ಕಾರ್ಯಗಳು ಎರಡು:
- ಅದು ಶಬ್ದರೂಪದಲ್ಲಿ ಹೊರಹೊಮ್ಮುತ್ತದೆ;
- ಮತ್ತು ರಾಗಾವೇಶದೊಡನೆ ಹೊರಹೊಮ್ಮುತ್ತದೆ.
ಇದು ಮನಸ್ಸಿನ ಸ್ವಭಾವ. ಮನಸ್ಸು ತಾನು ಪಟ್ಟ ದೊಡ್ಡ ದೊಡ್ಡ ಅನುಭವಗಳನ್ನು ತನ್ನಲ್ಲಿಯೇ ಅಣಗಿಸಿಕೊಂಡು ಸುಮ್ಮನಿರಲಾರದು. ಅದು ಬಾಯಿ ಬಿಟ್ಟು ತನ್ನ ಸುಖ ದುಃಖಗಳನ್ನು ಹೇಳಿಕೊಳ್ಳಬೇಕು. ತನ್ನ ದೈವದಲ್ಲಿ ಅದು ಹೇಳಿಕೊಳ್ಳುವ ಗೋಳೂ ಚಿಂತೆಯೂ ಸುಖಪ್ರಾಯವಾದುವೇ. ಏಕೆಂದರೆ ಅದು ದೈವವನ್ನು ಕುರಿತು ಹೇಳಿದ್ದು, ತಾನು ನಂಬಿದ್ದ ದೈವವನ್ನುದ್ದೇಶಿಸಿದ್ದು. ಆದದ್ದರಿಂದ ಅದು ತನ್ನ ಭಯ ಸಂತಾಪಗಳನ್ನು ನೀಗಿ ನೆಮ್ಮದಿ ತರುವಂಥಾದ್ದು. ಹೀಗೆ ಅಂತರಂಗದ ನೆಚ್ಚಿಕೆಯನ್ನೂ ಭರವಸೆಯನ್ನೂ ಸಂತೋಷವನ್ನೂ ಕೃತಜ್ಞತೆಯನ್ನೂ ಹೇಳಿಕೊಳ್ಳುವ ನುಡಿ ಕೀರ್ತನೆ.